You can access the distribution details by navigating to My pre-printed books > Distribution
ಯೌವ್ವನದ ದಿನಗಳಿಂದ ಸಾಮಾಜಿಕ ಸಂಘಟನೆಗಳಲ್ಲಿ ಭಾಗಿಯಾಗಿ ಅನ್ಯಾಯಗಳ ವಿರುದ್ಧ ಹೋರಾಟದ ಹಾದಿ ಹಿಡಿದ ಸುಧಾ ಜಿ ಅವರಿಗೆ ತಾವು ರಚಿಸುವ ಸಾಹಿತ್ಯವೂ ಸಮಾಜದ ಒಳಿತಿಗೆ ಪ್ರೇರಕವಾಗಿಯೇ ಇರಬೇಕೆಂಬ ಆಶಯ ಇರುವುದು ಸಹಜ. ಹಾಗಾಗಿ ಕಾವ್ಯ ಲೋಕದ ಕಾಲ್ಪನಿಕ ಜಗತ್ತಿನ ಸಂಚಾರಕ್ಕೆ ಅಡಿಯಿಡುವವರಲ್ಲ. ಪ್ರಾಕೃತಿಕ ಜಗತ್ತಿನ ಮೋಹಕ ಸೆಳೆತಕ್ಕಿಂತ ಸಾಮಾಜಿಕ ಬದುಕಿನ ಕಡೆಗೆ ತುಡಿತ ಹೆಚ್ಚು. ಬಳಸು ಮಾರ್ಗ ಅವರಿಗೆ ಸಮ್ಮತವಲ್ಲ. ಹೋರಾಟದ ಹಾದಿಯನ್ನೇ ಕಾವ್ಯದ ಮಾರ್ಗದಲ್ಲೂ ಹಿಡಿದಿದ್ದರ ಪ್ರತೀಕವಾಗಿ ಅವರ ಹತ್ತು ಹಲವು ಕವಿತೆಗಳಲ್ಲಿ ಸಾಮಾಜಿಕ ಎಚ್ಚರ ಎದ್ದು ಕಾಣುತ್ತವೆ. ಅನ್ಯಾಯ ಎನಿಸಿದ್ದರ ಪ್ರಶ್ನೆಗಳು ಏಳುತ್ತವೆ, ಪರಿಹಾರಕ್ಕೆ ದಾರಿಗಳನ್ನೂ ಅರಸ ಹೊರಡುತ್ತಾರೆ.
ನ್ಯಾಯವನು ನಾ ಬಯಸುವುದು, ಸಮಾನತೆಗೆ ನಾ ಆಗ್ರಹಿಸುವುದು ಸ್ವಾತಂತ್ರ್ಯವನು ನಾ ಕೇಳುವುದು ಸ್ತ್ರೀವಾದಿತನದ ಸಂಕೇತವಾದರೆ ಹೌದು ನಾ ಸ್ತ್ರೀವಾದಿಯೇ! ಎನ್ನುವ ಅವರೊಳಗೆ ಒಬ್ಬ ಪ್ರಖರ ಸ್ತ್ರೀವಾದಿ, ಮಹಿಳಾ ಚಿಂತಕಿ ಇರುವ ಕಾರಣ ಅವರ ಮೊದಲ ಆದ್ಯತೆ ಮಹಿಳೆಯರ ಸಮಸ್ಯೆಯತ್ತಲೇ ಇರಬೇಕಾದ್ದು ಸಹಜವೂ ಹೌದು, ಸಾಧುವೂ ಹೌದು. ಪರಂಪರೆಯಿಂದ ಹಿಡಿದ ಹಾದಿಯನ್ನೇ ಮತ್ತೆ ಮತ್ತೆ ಅವಲಂಬಿಸಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಅನ್ಯಾಯವನ್ನು ಎಂದೂ ಪ್ರತಿಭಟಿಸದೆ ಬಾಯಿಮುಚ್ಚಿ ಮೌನವಾಗಿ ಒಪ್ಪಿಕೊಳ್ಳುವ ಬಗ್ಗೆ ತೀವ್ರವಾದ ಆಕ್ರೋಶವಿದೆ. `ಹೋರಾಟಕ್ಕಿಳಿಯದೇ ಹೊನ್ನಬಾಳು ಸಾಧಿಸಲು ಸಾಧ್ಯವೇ ನೀನೇ ಈಗ ಹೇಳಪ್ಪಾ’ ಎಂದು ಪ್ರಶ್ನಿಸುವರು. ನೂರಾರು ವರ್ಷಗಳಿಂದ ಮಹಿಳೆಯರು ತಮ್ಮ ಅಸ್ತಿತ್ವಕ್ಕಾಗಿ ದನಿಗಾಗಿ ಹೋರಾಟ ಮಾಡಿ ಅರಿವಿನ ಬಾಗಿಲು ತೆಗೆದಿದ್ದರೂ ಸಮಾನತೆ ರಾತ್ರೋರಾತ್ರಿ ಆಗುವ ಬದಲಾವಣೆ ಅಲ್ಲ. ಸಮಸ್ಯೆಗಳನ್ನು ಅರ್ಥ ಮಾಡಿಸುವ ಪರಿಹಾರವನ್ನು ಹುಡುಕುವ ಕೆಲಸವನ್ನು ಮಾಡುವ ಹಂತದಲ್ಲಿ ತಮ್ಮ ಅಸ್ತಿತ್ವ ಕಾಯ್ದುಕೊಳ್ಳುತ್ತಾ ಅರಿವು ಮೂಡಿಸಬೇಕಿದೆ. `ಬಿಟ್ಟುಬಿಡು ನೀ ನನ್ನನು, ನಿರ್ಭಿಢೆಯಿಂದ, ನೀ ತಲೆತಗ್ಗಿಸುವ ಕೆಲಸ ಆಗದು ನನ್ನಿಂದ’ ಎನ್ನುವ ಆತ್ಮವಿಶ್ವಾಸದ ಭರವಸೆ ಕೊಡುವ ಅವರ ಪ್ರಕಾರ `ನನ್ನದೇ ಬದುಕಿಗೆ ನನ್ನದೇ ಕನಸಿಗೆ ಬೆಲೆಯಿದ್ದೇ ಇದೆ ಆ ದಿನಕಾಗಿ ಕಾಯುವ ಅಧಿಕಾರವೂ ನಮಗಿದ್ದೇ ಇದೆ’ ಈ ಕನಸು ನನಸಾಗಲು ಕೈ ಜೋಡಿಸಬೇಕಾದವರು ಮಹಿಳೆಯರನ್ನು ಮನುಷ್ಯರನ್ನಾಗಿ ನೋಡುತ್ತಾ ತನ್ನಂತೆಯೇ ಅವಳು ಎಂದು ಭಾವಿಸುವ ಸಮತೋಲನ ಮನಃಸ್ಥಿತಿಯ ಪುರುಷರು. ಮಹಿಳೆಯರು ತಮ್ಮನ್ನು ಅರಿತುಕೊಳ್ಳುತ್ತಾ ಪುರುಷರಿಗೆ ತಮ್ಮ ಬಗ್ಗೆ ಅರಿವು ಹುಟ್ಟಿಸಿ ಅರಿವಿನ ಬೆಳಕನ್ನು ವಿಸ್ತರಿಸುತ್ತಾ ಸಾಗಿ ಸಮಸಮಾಜದ ನಿರ್ಮಾಣ ಆಗಬೇಕಾಗಿದೆ ಎನ್ನುವ ಕರೆ ಅವರ ಕವಿತೆಗಳಲ್ಲಿ ಮತ್ತೆ ಮತ್ತೆ ಕೇಳಸಿಗುತ್ತವೆ.
ಇಂತಹ ನೋವಿಗೆ ಮಿಡಿಯುವ, ಅನ್ಯಾಯಕ್ಕೆ ಸಿಡಿಯುವ ಕವಿತೆಗಳ ಜೊತೆಗೆ ಭಾವುಕ ನೆಲೆಯ ಕೆಲವು ಕವಿತೆಗಳು ಸುಧಾ ಅವರ ಆರ್ದ್ರ ಅಂತಃಕರಣಕ್ಕೆ ಸಾಕ್ಷಿಗಳಾಗಿವೆ. ಸಂಬಂಧಗಳ ಬಂಧದ ಬಗ್ಗೆ ಕನ್ನಡಿ ಹಿಡಿಯುತ್ತಾರೆ.
Currently there are no reviews available for this book.
Be the first one to write a review for the book ಜೀವಪದ.