You can access the distribution details by navigating to My pre-printed books > Distribution
ಪುಸ್ತಕದ ಬಗ್ಗೆ ಕೆಲವು ಮಾತುಗಳು
1914-18ರವರೆಗೂ ನಡೆದ ಜಾಗತಿಕ ಯುದ್ಧದ ಸಮಯದಲ್ಲಿ ರಷ್ಯಾ ಜ಼ಾರ್ ದೊರೆಯ ಆಳ್ವಿಕೆಯಲ್ಲಿತ್ತು. ಶ್ರೀಮಂತ ಜಮೀನುದಾರರು ಜೀತದಾಳುಗಳನ್ನು ಮತ್ತು ಕುಶಲಕರ್ಮಿಗಳನ್ನು ಶೋಷಿಸುತ್ತಿದ್ದರು. ಜ಼ಾರ್‌ನ ಸೈನ್ಯಕ್ಕೆ ಬಡಜನರನ್ನು ಬಲವಂತವಾಗಿ ಸೇರಿಸಿಕೊಳ್ಳಲಾಯಿತು. ಆಗ ಸಾವಿರಾರು ಬಡವರ ಮಕ್ಕಳು ಬೀದಿಗೆ ಬಿದ್ದರು. ಅವರೆಲ್ಲಾ ಭಿಕ್ಷೆ ಬೇಡಿಯೊ, ಕಳ್ಳತನ ಮಾಡಿಯೊ ಬದುಕುತ್ತಿದ್ದರು. ಕೆಲವು ಹೆಣ್ಣುಮಕ್ಕಳು ಈ ಕೆಲಸಗಳ ಜೊತೆಗೆ ವೇಶ್ಯೆಯರಾದರು.
ಆ ಯುದ್ಧದ ಮಧ್ಯದಲ್ಲಿಯೇ ಲೆನಿನ್ ನೇತೃತ್ವದಲ್ಲಿ ಸಮಾಜವಾದಿ ಕ್ರಾಂತಿಯನ್ನು ಯಶಸ್ವಿಯಾಗಿ ಪೂರೈಸಿತು. ಇಡೀ ವಿಶ್ವದಲ್ಲಿ ಮೊಟ್ಟಮೊದಲ ಬಾರಿಗೆ ಕಾರ್ಮಿಕರ-ರೈತರ-ಬಡಜನರ ಅಧಿಕಾರವುಳ್ಳ ರಾಜ್ಯ ಅಸ್ತಿತ್ವಕ್ಕೆ ಬಂದಿತು. ಪರಿಸ್ಥಿತಿ ಬದಲಾಗತೊಡಗಿತು. ಎಲ್ಲಾ ಶ್ರಮಜೀವಿಗಳ ಒಳಿತಿಗಾಗಿ ಸರ್ಕಾರ ಎಂಬ ಧ್ಯೇಯವಿಟ್ಟುಕೊಂಡು ಅಸ್ತಿತ್ವಕ್ಕೆ ಬಂದ ಸರ್ಕಾರ ಮೊದಲ ದಿನವೇ ಎಲ್ಲರಿಗೂ "ಆಹಾರ, ಭೂಮಿ, ಶಾಂತಿ"ಯ ಘೋಷಣೆಯನ್ನು ಮಾಡಿ ಅದರ ಬಗ್ಗೆ ಕ್ರಮ ಕೈಗೊಳ್ಳಲಾರಂಭಿಸಿತು. ಕ್ರಮೇಣ ಇತರ ವಿಷಯಗಳ ಬಗ್ಗೆ ಗಮನ ಹರಿಸಿತು.
ಅದರಲ್ಲಿ ಒಂದು ಮುಖ್ಯ ಅಂಶ ಬಂದದ್ದು ಇಂತಹ ಬೀದಿಗೆ ಬಿದ್ದ, ಬಾಲಾಪರಾಧಿಗಳಾದ ಮಕ್ಕಳ ಭವಿಷ್ಯವನ್ನು ರೂಪಿಸುವುದು. ಹಳೆಯ ಜಡ್ಡುಗಟ್ಟಿದ ವಿಧಾನಗಳನ್ನು ಬಳಸದೆ 'ಹೊಸ ಮನುಷ್ಯ'ರನ್ನು ಸೃಷ್ಟಿಸಲು ಹೊಸ ವಿಧಾನಗಳ ಅನ್ವೇಷಣೆ ಮಾಡಲಾಯಿತು. ಅಂತಹ ಪ್ರಯತ್ನದಲ್ಲಿ ಅಸ್ತಿತ್ವಕ್ಕೆ ಬಂದವುಗಳೇ ಈ ಕಾಲೊನಿಗಳು. ಇಲ್ಲಿ ಬಾಲಾಪರಾಧಿಗಳನ್ನು ಸೇರಿಸಲಾಯಿತು.
ಅಂತಹ ಒಂದು ಬಾಲಾಪರಾಧಿಗಳ ಗೃಹದ ಮುಖ್ಯಸ್ಥರಾಗಿ ಬಂದ ಆಂಟನ್ ಮಕರೆಂಕೊರವರು, ಇಂತಹ ಮಕ್ಕಳನ್ನು ಹೊಸ ಮನುಷ್ಯರನ್ನಾಗಿ ರೂಪಿಸಲು ತಮ್ಮ ಅನುಭವದ ಮತ್ತು ಅಧ್ಯಯನದ ಮೂಲಕ ಹೊಸ ವಿಧಾನಗಳನ್ನು ರೂಪಿಸಿದರು. ಮತ್ತೆ ತಮ್ಮ ಅನುಭವದ ಆಧಾರದ ಮೇಲೆ ಹೊಸ ವಿಧಾನಗಳನ್ನು ಕಂಡುಹಿಡಿದರು. ಆ ಅನುಭವಗಳನ್ನೇ ಅವರು ಈ ಪುಸ್ತಕದಲ್ಲಿ ರೂಪಿಸಿದ್ದಾರೆ. ಮೂರು ಸಂಪುಟಗಳಿರುವ ಈ ಪುಸ್ತಕದ ಎರಡನೆಯ ಸಂಪುಟವಿದು.
ಮೊದಲ ಭಾಗದಲ್ಲಿ ಮಕರೆಂಕೊ ತಮ್ಮದೇ ವಿಧಾನದಲ್ಲಿ ಮಕ್ಕಳನ್ನು ತಿದ್ದಲು ಆರಂಭಿಸುತ್ತಾರೆ. ಮೊದಲಲ್ಲಿ ತೀವ್ರವಾಗಿ ಪ್ರತಿರೋಧಿಸಿದ ಮಕ್ಕಳು ಕ್ರಮೇಣವಾಗಿ ಅವರ ಶಿಸ್ತು, ಕಾಳಜಿ, ಪ್ರೀತಿಗೆ ತಲೆಬಾಗಲಾರಂಭಿಸುತ್ತವೆ. ಒಂದೆಡೆ ಆರ್ಥಿಕ ಸಮಸ್ಯೆ, ಇನ್ನೊಂದೆಡೆ ಈ ಮಕ್ಕಳಲ್ಲಿದ್ದ ಸಾಂಸ್ಕೃತಿಕ ಕೊರತೆಯನ್ನು ನೀಗಿಸಿ ಅವರನ್ನು ಹೊಸ ಮನುಷ್ಯರನ್ನಾಗಿ ಮಾಡಲು ಶತಾಯಗತಾಯ ಪ್ರಯತ್ನಿಸುತ್ತಾರೆ. ಆ ಪ್ರಯತ್ನದಲ್ಲಿ ಸಾಕಷ್ಟು ಯಶಸ್ವಿಯಾಗುತ್ತಾರೆ ಕೂಡ.
ಅವರೆಲ್ಲಾ ಹಳೆಯ ಜಾಗವನ್ನು ಬಿಟ್ಟು ಟ್ರೆಪ್ಕೆ ಎಸ್ಟೇಟ್ ಗೆ ಹೋಗುವುದರೊಂದಿಗೆ ಮೊದಲ ಭಾಗ ಮುಕ್ತಾಯವಾಗುತ್ತದೆ.
ಅಲ್ಲಿ ಅವರೆಲ್ಲಾ ಸೇರಿ ಹೇಗೆ ತಮ್ಮ ಸಮುದಾಯವನ್ನು ಬಲಿಷ್ಟಗೊಳಿಸಿಕೊಳ್ಳುತ್ತಾರೆ, ಅವರ ನಡುವೆ ಆತ್ಮೀಯತೆ ಹೇಗೆ ಬೆಳೆಯುತ್ತದೆ, ತಮ್ಮ ಆರ್ಥಿಕತೆಯನ್ನು ಹೇಗೆ ಸುಧಾರಿಸಿಕೊಳ್ಳುತ್ತಾರೆ, ಬರುವ ಹೊಸ ಬಾಲಾಪರಾಧಿಗಳನ್ನು ಮಕರೆಂಕೊ ಮತ್ತು ಶಿಕ್ಷಕರಲ್ಲದೆ, ಹಿರಿಯ ಹುಡುಗರು ಹೇಗೆ ತಿದ್ದುತ್ತಾರೆ, ಬೆಳೆದು ನಿಂತ ಹುಡುಗರಲ್ಲಿ ಬರುವ ಪ್ರೀತಿ, ಪ್ರೇಮದ ಸಮಸ್ಯೆಗಳನ್ನು ಹೇಗೆ ನಿವಾರಿಸಲಾಗುತ್ತದೆ, ಶಿಕ್ಷಣ ಮತ್ತು ಶ್ರಮದ ಬಗ್ಗೆ ಒಲವನ್ನು ಹೇಗೆ ಮೂಡಿಸಲಾಗುತ್ತದೆ ಎಂಬುದೇ ಎರಡನೆಯ ಭಾಗದ ತಿರುಳು.
Currently there are no reviews available for this book.
Be the first one to write a review for the book ಬದುಕಿನ ಹಾದಿ - ಭಾಗ 2.