You can access the distribution details by navigating to My pre-printed books > Distribution
ಅಮೇರಿಕಾದ ಗುಲಾಮಗಿರಿಯ ವಿರುದ್ಧದ, ವರ್ಣಭೇದ ವಿರೋಧಿ ಕಥಾಹಂದರವನ್ನು ಹೊಂದಿರುವ ಈ ಕೃತಿಯನ್ನು ಬರೆದ ಅಮೇರಿಕಾದ ಖ್ಯಾತ ಬರಹಗಾರ್ತಿ ಹ್ಯಾರಿಯೆಟ್ ಬೀಚರ್ ಸ್ಟೋವ್‌ರವರು, ಗುಲಾಮಗಿರಿಯ ವಿರುದ್ಧ ಹೋರಾಡಿ ಅದಕ್ಕೆ ಅಂತ್ಯ ಹಾಕಿದ ಮಹಾನ್ ಪ್ರಜಾಪ್ರಭುತ್ವವಾದಿ ಅಬ್ರಹಾಂ ಲಿಂಕನ್‌ರವರನ್ನು ಭೇಟಿಯಾದಾಗ, ಲಿಂಕನ್‌ರವರು ಇವರನ್ನು ನೋಡಿ, "ಈ ಪುಟ್ಟ ಮಹಿಳೆ ಇಷ್ಟು ದೊಡ್ಡ ಕ್ರಾಂತಿಗೆ ಕಾರಣರಾದರಾ!" ಎಂದು ಉದ್ಗರಿಸಿ ಸ್ವಾಗತಿಸಿದರಂತೆ. ಅಂದರೆ ಈ ಪುಸ್ತಕದ ಪ್ರಭಾವವನ್ನು ನಾವು ಊಹಿಸಿಕೊಳ್ಳಬಹುದಾಗಿದೆ.
ಅಂಕಲ್ ಟಾಮ್ಸ್ ಕ್ಯಾಬಿನ್ ಅಮೇರಿಕಾದಲ್ಲಿದ್ದ ಗುಲಾಮಗಿರಿ ಪದ್ಧತಿಯನ್ನು ವಿರೋಧಿಸಿ ಬರೆದಂತಹ ಮೊಟ್ಟ ಮೊದಲ ಕೃತಿ. 1851ರಲ್ಲಿ ’ನ್ಯಾಷನಲ್ ಎರಾ' ಎಂಬ ದಿನಪತ್ರಿಕೆಯಲ್ಲಿ ಒಂದು ವರ್ಷ ಕಾಲ ಧಾರವಾಹಿಯಾಗಿ ಪ್ರಕಟಗೊಂಡಿತು. ನಂತರ ಅದು ಪುಸ್ತಕ ರೂಪದಲ್ಲಿ ಪ್ರಕಟಗೊಂಡಾಗ, ಒಂದು ತಿಂಗಳಲ್ಲೇ 1 ಲಕ್ಷ ಪ್ರತಿಗಳು, 1 ವರ್ಷದಲ್ಲಿ 3 ಲಕ್ಷ ಪ್ರತಿಗಳು ಮಾರಾಟವಾದವು. ಪ್ರತಿಯೊಬ್ಬರ ಮನೆಯಲ್ಲೂ ಈ ಪುಸ್ತಕ ಇತ್ತು. ನಂತರ ಅದು ಯೂರೋಪ್‌ನಲ್ಲಿ ಇಂಗ್ಲೆಂಡ್, ಇಟಲಿ, ಫ಼್ರಾನ್ಸ್, ಜರ್ಮನಿ, ರಷ್ಯಾ ಮುಂತಾದ ದೇಶಗಳಲ್ಲಿ ಪ್ರಕಟವಾಗಿ ಸುಮಾರು 15 ಲಕ್ಷ ಪ್ರತಿಗಳು ಮಾರಾಟವಾದವು. ಆ ಕಾಲದಲ್ಲಿ ಬೈಬಲ್‌ಅನ್ನು ಬಿಟ್ಟರೆ ಅತಿ ಹೆಚ್ಚು ಮಾರಾಟವಾದ ಕೃತಿ ಎಂದರೆ ಅಂಕಲ್ ಟಾಮ್ಸ್ ಕ್ಯಾಬಿನ್.
ಲೇಖಕಿ ಅಂಕಲ್ ಟಾಮ್ಸ್ ಕ್ಯಾಬಿನ್ ಪುಸ್ತಕವನ್ನು ಬರೆದಾಗ ಗುಲಾಮಗಿರಿ ಅಸ್ತಿತ್ವದಲ್ಲಿ ಇದ್ದದ್ದು ಮಾತ್ರವಲ್ಲದೆ, ಅದು ಬಹಳ ಅಮಾನವೀಯವಾಗಿ ಬಿಟ್ಟಿತ್ತು. ದಕ್ಷಿಣ ಭಾಗದಲ್ಲಿ ಗುಲಾಮಗಿರಿಯ ವಾಸ್ತವತೆ, ಅದರಿಂದಾಗುತ್ತಿದ್ದ ಸಮಸ್ಯೆಗಳು, ಆ ಅಮಾನವೀಯತೆ, ಬರ್ಬರತೆಯನ್ನು ಜನರಿಗೆ ಅರ್ಥ ಮಾಡಿಸುವುದು ಈ ಕಾದಂಬರಿಯ ಉದ್ದೇಶವಾಗಿತ್ತು.
ಇದು ಪ್ರಕಟವಾದ ನಂತರ ಗುಲಾಮಗಿರಿಯ ಬಗ್ಗೆ ಚರ್ಚೆಗಳು ತೀವ್ರವಾದವು. ಒಂದು ಇಡೀ ಸಮಾಜದ ಪ್ರಜ್ಞೆಯನ್ನು ಕಲಕಿದಂತಹ ಕೃತಿ ಇದು ಎಂದರೆ ತಪ್ಪಾಗಲಾರದು.
ಉತ್ತರ ಭಾಗದಲ್ಲಿನ ಜನತೆ ಈ ಪುಸ್ತಕವನ್ನು ಸ್ವಾಗತಿಸಿದ್ದು ಮಾತ್ರವಲ್ಲದೆ, ಸಾವಿರಾರು ಜನ ಅಬಾಲಿಷನಿಸ್ಟ್ ಗಳಾದರು. (ಗುಲಾಮಗಿರಿ ರದ್ದುಗೊಳಿಸಬೇಕೆಂದು ಆಗ್ರಹಿಸುತ್ತಿದ್ದವರು).
ಅಂದಿನ ಅಮೇರಿಕಾದ ಅಧ್ಯಕ್ಷರಾದ ಅಬ್ರಹಾಂ ಲಿಂಕನ್ ರ ನೇತೃತ್ವದಲ್ಲಿ ನಡೆದ ಯುದ್ಧದಲ್ಲಿ ಅಬಾಲಿಷನಿಸ್ಟ್ ಗಳಿಗೆ ಜಯ ದೊರೆಯಿತು. 1865 ಅಮೇರಿಕಾ ಸಂವಿಧಾನಕ್ಕೆ ತಂದ 13ನೇ ತಿದ್ದುಪಡಿಯ ಪ್ರಕಾರ ಗುಲಾಮಗಿರಿಯನ್ನು ಶಾಸನಬದ್ಧವಾಗಿ ರದ್ದುಗೊಳಿಸಲಾಯಿತು.
ಹಾಗಾಗಿ ಈ ಪುಸ್ತಕ ಮಾನವ ಇತಿಹಾಸದಲ್ಲಿ, ದಮನಿತರ ಹೋರಾಟದ ಇತಿಹಾಸದಲ್ಲಿ ಅಜರಾಮರವಾಗಿ ಉಳಿದಿದೆ. ಇಂದಿಗೂ ಸಹ ತುಳಿತಕ್ಕೊಳಪಟ್ಟ, ಎಲ್ಲಾ ರೀತಿಯ ತಾರತಮ್ಯಕ್ಕೆ ಒಳಪಟ್ಟ ಜನರನ್ನು ಪ್ರೇರೇಪಿಸುವ ಸ್ಫೂರ್ತಿದಾಯಕ ಕೃತಿಯಾಗಿದೆ.
Currently there are no reviews available for this book.
Be the first one to write a review for the book ಅಂಕಲ್ ಟಾಮ್‌ನ ಕ್ಯಾಬಿನ್.